ಸಂಸ್ಕೃತ ವರ್ಣಮಾಲೆ

ವೈದಿಕ-ವ್ಯಾಕರಣ ೧
ನತ್ವಾ ಗಣಪತಿಂ ಭಕ್ತ್ಯಾ ಸ್ತುತ್ವಾ ಸರಸ್ವತೀಂ ಧಿಯಾ |
ಸ್ಮೃತ್ವಾऽಚಾರ್ಯಾನ್ ಹರಿಂ ರುದ್ರಂ ಶ್ರುತ್ಯರ್ಥಸುಭಗಾಯ ಚ || ೧ ||
ಯತೇ ವ್ಯಾಕರಣಂ ವಕ್ತುಂ ವೈದಿಕಂ ಶಾಸ್ತ್ರಸಂಮಿತಮ್ |
ಕರ್ಣಾಟಭಾಷಯಾ ತಸ್ಮಾತ್ ಸಹ್ಯತಾಂ ಪಂಡಿತೈರ್ಮುದಾ || ೨ ||

ಮೊದಲಿಗೆ ವಿಘ್ನೇಶ್ವರನನ್ನು ಸರ್ವವಿಘ್ನವಿನಾಶಕ್ಕಾಗಿ ಭಕ್ತಿಪೂರ್ವಕವಾಗಿ ನಮಿಸಿ, ವಿದ್ಯಾಧಿದೇವತೆಯಾದ ಸರಸ್ವತಿಯನ್ನು ಸುಜ್ಞಾನಕ್ಕಾಗಿ ಬುದ್ಧಿಪೂರ್ವಕವಾಗಿ ಸ್ತುತಿಸಿ ಹಾಗೂ ಆಚಾರ್ಯಪರಂಪರೆಯನ್ನೂ ಶ್ರೀಹರಿಹರರನ್ನೂ ಸ್ಮರಿಸಿ, ಸರ್ವಜ್ಞಾನಮಯವಾದ ಅನರ್ಘ್ಯವೂ ಆದ ವೇದರಾಶಿಯ ಸಮ್ಯಗರ್ಥಾನುಸಂಧಾನದ ಸೌಲಭ್ಯಕ್ಕಾಗಿ (ಸುಲಭತೆಗಾಗಿ) / ಸೌಭಾಗ್ಯಕ್ಕಾಗಿ (ಸುಭಗತೆಗಾಗಿ), ಶಾಸ್ತ್ರಸಂಮಿತವಾಗಿ ವೈದಿಕ ವ್ಯಾಕರಣವನ್ನು ಕನ್ನಡಭಾಷೆಯಲ್ಲಿ ಹೇಳಲು ಪ್ರಯತ್ನಿಸುತ್ತೇನೆ. ಹಾಗಾಗಿ, ನನ್ನೀ ದುಸ್ಸಾಹಸವನ್ನು ವಿದ್ವಜ್ಜನರು ಪ್ರೀತಿಯಿಂದ ಸಹಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ.

ಅಧ್ಯಾಯ ೧
ವರ್ಣ-ವಿಚಾರ
ವೈದಿಕಭಾಷೆಯಲ್ಲಿ ಒಟ್ಟು ೫೨ ವರ್ಣಗಳಿವೆ. ಇವುಗಳಲ್ಲಿ ೧೩ ಸ್ವರಗಳು ಹಾಗೂ ೩೯ ವ್ಯಂಜನಗಳು.

೧. ಸ್ವರಗಳು (Vowels)— ೧೩

ಇವು ೨ ವಿಧ— ಸಮಾನಾಕ್ಷರಗಳು ಹಾಗೂ ಸಂಧ್ಯಕ್ಷರಗಳು (ಋಗ್ವೇದ ಪ್ರಾತಿಶಾಖ್ಯ).
ಸಮಾನಾಕ್ಷರಗಳು (Monophthongs / Simple Vowels / ಸರಳ ಸ್ವರಗಳು)— ೯
अ (ಅ), आ (ಆ), ऋ (ಋ), ॠ (ೠ), इ (ಇ), ई (ಈ), उ (ಉ), ऊ (ಊ), लृ (ಲೃ)
ಸಂಧ್ಯಕ್ಷರಗಳು (ಸಂಧಿ-ಅಕ್ಷರಗಳು / Diphthongs / ಸಂಕೀರ್ಣ ಅಥವಾ ಸಂಯುಕ್ತ ಸ್ವರಗಳು)— ೪
ए (ಏ=ಅ+ಇ), ओ (ಓ=ಅ+ಉ), ऐ (ಐ=ಅ+ಏ), औ (ಔ=ಅ+ಓ)
ಇಲ್ಲಿ ಏ, ಓ— ಗುಣಸ್ವರಗಳು, ಐ,ಔ— ವೃದ್ಧಿಸ್ವರಗಳು.

೨. ವ್ಯಂಜನಗಳು (Consonants)— ೩೯

ಕಂಠ್ಯ (Gutturals / ಕಂಠಜನ್ಯ)— ೫— क् (ಕ್), ख् (ಖ್), ग् (ಗ್), घ् (ಘ್), ङ् (ಙ್)— (ಕ-ವರ್ಗ)
ತಾಲವ್ಯ (Palatals / ತಾಲುಜನ್ಯ / ಬಾಯಂಗುಳಜನ್ಯ)— ೫— च् (ಚ್), छ् (ಛ್), ज् (ಜ್), झ् (ಝ್), ञ् (ಞ್)— (ಚ-ವರ್ಗ)
ಮೂರ್ಧನ್ಯ (Cerebrals / ಮಸ್ತಕಜನ್ಯ)— ೭— ट् (ಟ್), ठ्(ಠ್), ड् (ಡ್), ळ् (ಳ್), ढ् (ಢ್), ळ्ह (ಳ್ಹ), ण् (ಣ್)— (ಟ-ವರ್ಗ)
ದನ್ತ್ಯ (Dentals / ದಂತಜನ್ಯ)— ೫— त् (ತ್), थ् (ಥ್), द् (ದ್), ध् (ಧ್), न् (ನ್)— (ತ-ವರ್ಗ)
ಓಷ್ಠ್ಯ (Labials / ತುಟಿಯಿಂದ ಹುಟ್ಟಿದ್ದು)— ೫— प् फ् ब् भ् म् (ಪ್ ಫ್ ಬ್ ಭ್ ಮ್)—(ಪ-ವರ್ಗ)

ಈ ಮೇಲಿನ ೨೭ ವರ್ಣಗಳು ೫ ವರ್ಗಕ್ರಮದಲ್ಲಿರುವುದರಿಂದ ವರ್ಗೀಯವ್ಯಂಜನಗಳು / ಮೃದುವ್ಯಂಜನಗಳು; ಕೇವಲ ಅರ್ಧವರ್ಣಗಳಾಗಿರುವುದರಿಂದಲೂ, ಬಾಯಂಗುಳದ ಸುತ್ತಮುತ್ತಲಿನ ಸ್ಪರ್ಶದಿಂದ ಉತ್ಪತ್ತಿಯಾಗುವುದರಿಂದಲೂ ಸ್ಪರ್ಶವರ್ಣಗಳು.

ಅಂತಸ್ಥವರ್ಣಗಳು (Semivowels / ಅರೆಸ್ವರಗಳು / ಅರ್ಧಸ್ವರಗಳು— ಮೃದುವ್ಯಂಜನಗಳು)— ೪— य् र् ल् व् (ಯ್ ರ್ ಲ್ ವ್)
ಊಷ್ಮವರ್ಣಗಳು (Breathings / ಶ್ವಾಸವರ್ಣಗಳು / ಉಸಿರುವರ್ಣಗಳು / ಕರ್ಕಶವ್ಯಂಜನಗಳು)— ೬— श् ष् स् ह्, जिह्वामूलीय (अःॅ्क, अःॅ्ख), उपध्मानीय (अःॅ्प, अःॅ्फ)— ಶ್ ಷ್ ಸ್ ಹ್, ಜಿಹ್ವಾಮೂಲೀಯ (ನಾಲಿಗೆಬುಡದಿಂದ ಹುಟ್ಟುವ ಅಃಕ, ಅಃಖ ಗಳ ಮಧ್ಯದ ವಿಸರ್ಗೋಚ್ಚಾರ ಅಹ್-ಕ, ಅಹ್-ಖ), ಉಪಧ್ಮಾನೀಯ (ಓಷ್ಠ / ತುಟಿಗಳಿಂದ ಜನ್ಯ, ಅಃಪ, ಅಃಫ ಗಳ ನಡುವಿನ ವಿಸರ್ಗೋಚ್ಚಾರ ಅಫ್-ಪ, ಅಫ್-ಫ)
ಅನುಸ್ವಾರ (Pure nasala / ಶುದ್ಧ ಅನುನಾಸಿಕ)— अं (ಅಂ) “ಅನುಸ್ವಾರೋ ವ್ಯಂಜನಂ ವಾ ಸ್ವರೋ ವಾ”— ಅನುಸ್ವಾರವು ವ್ಯಂಜನವೂ ಹೌದು, ಸ್ವರವೂ ಹೌದು.
(ಸಂಗ್ರಹದಿಂದ)

Leave a Reply

Your email address will not be published. Required fields are marked *