ಧನುರ್ಮಾಸ
☆☆🌹 ಧನುರ್ಮಾಸದ ವಿಶೇಷ 🌹☆☆
ಕೃಷ್ಣನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿ “ಮಾಸಾನಾಂ ಮಾರ್ಗಶೀರ್ಷೋಸ್ಮಿ” ಎಂದು ಅಪ್ಪಣೆ ಕೊಡಿಸಿದ್ದಾನೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಬೇಕಾದರೆ ಒಂದು ತಿಂಗಳು ಬೇಕಾಗುತ್ತದೆ. ಅದರಂತೆಯೇ ಸೂರ್ಯ ಧನುರಾಶಿಯಲ್ಲಿ ಪ್ರವೇಶ ಮಾಡಿ ಮಕರರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು “ಧನುರ್ಮಾಸ” ಎಂದು ಕರೆಯುತ್ತಾರೆ. ಈ ಮಾಸದಲ್ಲಿ ವಿಶೇಷವಾಗಿ ಚಳಿಚಳಿ ಇರುತ್ತದೆ.
ಚಳಿಯೆಂದು ಬಹಳ ಹೊತ್ತು ಹಾಸಿಗೆ ಮೇಲೆ ಹೊದ್ದು ಮಲಗುವುದು ಅನಾರೋಗ್ಯ. ಏನು ತಿಂದರೂ ಭಸ್ಮ ಮಾಡಿಬಿಡುವಂತಹ ಉತ್ತಮವಾದ ಹವೆ. ಡಿಸೆಂಬರ್ ತಿಂಗಳೆಂದರೆ ಹೇಳಿಕೇಳಿ ಮೈಕೊರೆವ ಚಳಿಗಾಲ. ಚಳಿಯ ತೀವ್ರತೆಯೆಷ್ಟು ಇರುತ್ತದೆ ಎಂದರೆ ಚಳಿಯನ್ನು ತಾಳಲಾರದೆ, ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮುದುರಿಕೊಂಡು ಮಲಗಿಕೊಳ್ಳುತ್ತಾನೆ. ಆದ್ದರಿಂದಲೇ ಈ ಮಾಸಕ್ಕೆ ‘ಧನುರ್ಮಾಸ’ ಎಂದು ಹೆಸರು. ಇಂತಹ ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಒಂದು ತಿಂಗಳು ಹುಗ್ಗಿಯನ್ನು ತಯಾರು ಮಾಡಿ ಧನುರ್ ನಾರಾಯಣನಿಗೆ ಸಮರ್ಪಿಸುವುದು ಹಿಂದೂ ಸಂಪ್ರದಾಯ.
ಮುದ್ಗಾನ್ನವೆಂದರೇನು ? ಮುದ್ಗಾನ್ನ ಎಂದರೆ ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಜಾಜಿಕಾಯಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನು ಕೂಡಿಸಿ ಬೇಯಿಸಿದ ಪದಾರ್ಥವೇ ಮುದ್ಗಾನ್ನ.
ಧನುರ್ಮಾಸದಲ್ಲಿ ದೇವರ ಪೂಜೆಗೆ, ನೈವೇದ್ಯ ಪ್ರಸಾದಕ್ಕೆ ಮುದ್ಗಾನ್ನವೇ ಏಕೆ ಎಂದಾಗ, ಇದಕ್ಕೆ ನಾನಾ ಕಾರಣಗಳುಂಟು. ಮನುಷ್ಯ ಶುದ್ಧ ಸೋಮಾರಿ, ಶಾಸ್ತ್ರದ ಕಟ್ಟುಪಾಡುಗಳು ಇಲ್ಲವಾದರೆ ಮನುಷ್ಯ ಬಿಸಿಲು ಮೈಸೋಂಕುವರೆಗೂ ಹೊದ್ದ ಕಂಬಳಿಯ ಮುಸುಕನ್ನು ಸರಿಸುತ್ತಲೇ ಇರಲಿಲ್ಲ. ಆದರೆ ವಸ್ತುತಃ ಸೂರ್ಯೋದಯವಾದೊಡನೆ ಚಳಿ ಹೆಚ್ಚಾಗುತ್ತದೆ. ಆದ್ದರಿಂದಲೇ ಮೈಬೆಚ್ಚಗಾಗಿಸುವ ಹಾಗು ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವ ಪವಿತ್ರ ಸಾತ್ವಿಕ ಆಹಾರ ಎಂದರೆ ಹುಗ್ಗಿ.
ಚಳಿಗಾಲದಲ್ಲಿ ಚರ್ಮ ಒಡೆದು ರೂಪಗೊಳ್ಳುವುದರಿಂದ ಚರ್ಮವನ್ನು ಸ್ನಿಗ್ಧಗೊಳಿಸುವ ಆಹಾರದ ಸೇವನೆ ತೀರಾ ಅವಶ್ಯ. ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರಿಂದಲೂ, ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದರಿಂದ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಹೀಗೆ ಧನುರ್ಮಾಸದಲ್ಲಿ ಹುಗ್ಗಿ ಸೇವನೆಯು ವೈಜ್ಞಾನಿಕವಾಗಿಯೂ ಸಮಂಜಸ.
ಮಹಾವಿಷ್ಣುವು ತಿರುಮಲದಲ್ಲಿ ಶ್ರೀನಿವಾಸನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ, ಭೂದೇವಿಯು ಒಬ್ಬ ಸಾಮಾನ್ಯ ಹುಡುಗಿ ಗೋದೆಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳು ಎಂಬ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀವೈಷ್ಣವರು ಆ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ.
ಧನುರ್ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ. ಪುರಾಣಗಳ ಪ್ರಕಾರ, ದೇವತೆಗಳ ರಾಜನಾದ ಇಂದ್ರ ಅಸುರರಿಂದ ಪರಾಜಿತನಾಗಿ ರಾಜ್ಯಭ್ರಷ್ಟನಾಗುತ್ತಾನೆ. ಆಗ ತನ್ನ ಪತಿದೇವನ ಕಲ್ಯಾಣಕ್ಕಾಗಿ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು ಮತ್ತು ಶ್ರೀಹರಿಯನ್ನು ಪೂಜಿಸಿದಳು. ಇದರಿಂದ ಸಂತುಷ್ಟನಾದ ಶ್ರೀಮನ್ನಾರಾಯಣನ ಕೃಪೆಯಿಂದ ಇಂದ್ರ ದೇವರು ಪುನಃ ತನ್ನ ಪದವಿ ಪಡೆದುಕೊಂಡದ್ದು ಇದೇ ಧನುರ್ಮಾಸದಲ್ಲಿ.
ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ. ಅದರಂತೆ ಉತ್ತರಾಯಣವು ಹಗಲಿನ ಸಮಯ ಆದರೆ ಈ ಧನುರ್ಮಾಸವು ಹಗಲು ರಾತ್ರಿ ಎರಡು ಸೇರಿದ ಸಮಯವೆಂದು ಹೇಳಲಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಯಾರು ಎದ್ದು ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವರ ಮನೋಭೀಷ್ಟಗಳು ಅಕ್ಷಯವಾಗಿ ನೆರವೇರುತ್ತದೆ. ನಕ್ಷತ್ರಗಳು ಕಾಣುವ ಸಮಯ ಉತ್ತಮ ಪೂಜಾಫಲ ಕಾಲ. ಅವು ಮರೆಯಾದರೆ ಮಧ್ಯಮ, ಮುಂಜಾನೆಯ ಹೊಂಬೆಳಕು ಮೂಡಿದರೆ ಅಧಮಕಾಲ. ಮಧ್ಯಾಹ್ನವಂತು ವ್ಯರ್ಥ.
ಭಾಗವತದಲ್ಲಿ ಗೋಪಿಯರ ಕಾತ್ಯಾಯನಿ ವ್ರತವನ್ನು ಕುರಿತು ಹೇಳಲಾಗಿದೆ. ಧನುರ್ಮಾಸದ ಮುಂಜಾವಿನಲ್ಲಿ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧವಾದ ಇಷ್ಟಾರ್ಥವನ್ನು ಕೊಡುತ್ತದೆ ಎಂಬುದನ್ನು ಸೂಚಿಸುವುದಕ್ಕಾಗಿಯೇ ಈ ವ್ರತದ ವಿಧಿಯನ್ನು ಗೋಪಿಯರ ಕೂಡಿ ನಂದಗೋಪನ ಮಗನಾದ ಶ್ರೀಕೃಷ್ಣ ಪರಮಾತ್ಮನನ್ನು ಪತಿಯಾಗಿ ವರಿಸಲು ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನ್ನೇ ದೊರಕಿಸಿಕೊಡುವುದು ಮಾಸವಾಗಿರುವುದರಿಂದ ಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ, ಎಲ್ಲರಿಗೂ ಎಲ್ಲ ದೇಗುಲಗಳಲ್ಲಿಯೂ ಧನುರ್ಮಾಸದ ಆಚರಣೆಗಳನ್ನು ನಡೆಸುತ್ತಾರೆ.
ಧನುರ್ಮಾಸದ ಪೂಜಾ ನೈವೇದ್ಯ ನಿಯಮವನ್ನು ತಿಂಗಳುದ್ದಕ್ಕೂ ಪ್ರತಿದಿನ ನಡೆಸಬೇಕೆಂದು ವಿಧಿಸಲಾಗಿರುವುದಾದರೂ, ಆಪದ್ಧರ್ಮಿಗಳು ಒಂದೇ ಒಂದು ದಿನವಾದರೂ ಧನುರ್ಮಾಸ ವ್ರತವನ್ನು ನಡೆಸಿ ತೃಪ್ತಿ ಪಡೆಯುವುದುಂಟು. ಇದನ್ನೂ ಮಾಡಲಾರದವರು ಪೌಷ್ಯಮಾಸದಲ್ಲಿ ಬರುವ “ಮುಕ್ಕೋಟಿ ದ್ವಾದಶೀ”ಯಂದು ಧನುರ್ಮಾಸದ ಕೃತಾರ್ಥತೆಯ ಸಮಾಧಾನವನ್ನು ತಾಳುವರು. ತಿರುಪತಿಯ ತಿಮ್ಮಪ್ಪನಿಗೆ ಸಲ್ಲುವ ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಪೂಜಾ ಕೈಂಕರ್ಯಗಳು ವೈಶಿಷ್ಟ್ಯಪೂರ್ಣವಾದುದು. ಧನುರ್ಮಾಸ ಪುಣ್ಯ ಪೂರ್ಣ ಮಾಸ; ಪರ್ವಪ್ರವರ ಪ್ರತಿಷ್ಠಿತ ಮಾಸ.
ಶ್ರೀಕೃಷ್ಣಾರ್ಪಣಮಸ್ತು