ತ್ರಿಗುಣಗಳು

ಇಂದಿನ ವಿಜ್ಞಾನದ ಪ್ರಕಾರ, ಬ್ರಹ್ಮಾಂಡದ ನಿರ್ಮಿತಿಯು ಎಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್, ಮೆಸೋನ್, ಗ್ಲೂಆನ್, ಕ್ವಾರ್ಕ್ಸ್‌ನಂತಹ ಅತಿ ಸಣ್ಣ ಸ್ಥೂಲ ಕಣಗಳಿಂದ ಆಗಿದೆ.

ಆದರೆ ಅಧ್ಯಾತ್ಮಶಾಸ್ತ್ರದಿಂದ ಬ್ರಹ್ಮಾಂಡದ ನಿರ್ಮಿತಿಯು ಅತಿ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿದುಬರುತ್ತದೆ. ಈ ಅತಿ ಸೂಕ್ಷ್ಮ ಕಣಗಳು ಎಂದರೆ ‘ತ್ರಿಗುಣಗಳು’. ‘ತ್ರಿಗುಣ’ ಶಬ್ದದ ವ್ಯುತ್ಪತ್ತಿಯು ಸಂಸ್ಕೃತ ಶಬ್ದ ‘ತ್ರಿ’ (ಎಂದರೆ ಮೂರು) ಮತ್ತು ‘ಗುಣ’ (ಎಂದರೆ ‘ಸೂಕ್ಷ್ಮ ಕಣಗಳು’) ಇವುಗಳಿಂದ ಆಗಿದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳು ತ್ರಿಗುಣಗಳು.

‘ಸತ್ತ್ವ’ ಗುಣವು ರಜ ಮತ್ತು ತಮ ಗುಣಗಳ ತುಲನೆಯಲ್ಲಿ ಅತೀ ಸೂಕ್ಷ್ಮವಾಗಿದೆ. ದೇವತ್ವಕ್ಕೆ ಅತಿ ಹತ್ತಿರವಾದ ಗುಣವೂ ಹೌದು. ಸತ್ತ್ವ ಗುಣವು ಹೆಚ್ಚಿನ ಪ್ರಮಾಣದಲ್ಲಿರುವವರಲ್ಲಿ ಮುಂದಿನ ಲಕ್ಷಣಗಳು ಕಂಡುಬರುತ್ತವೆ – ತಾಳ್ಮೆ, ಸಾತತ್ಯ, ಕ್ಷಮಿಸುವ ವೃತ್ತಿ, ಜಿಜ್ಞಾಸೆ ಇತ್ಯಾದಿ.

‘ತಮೋ’ ಗುಣವು ಉಳಿದೆರಡು ಗುಣಗಳು ತುಲನೆಯಲ್ಲಿ ಕನಿಷ್ಠ ಮಟ್ಟದ್ದಾಗಿದೆ. ತಮೋ ಗುಣಿ ಮನುಷ್ಯನಲ್ಲಿ ಆಲಸ್ಯ, ಅತಿಯಾಸೆ, ಭೌತಿಕ ವಿಷಯಗಳ ಆಸಕ್ತಿ ಇತ್ಯಾದಿಗಳು ಕಂಡುಬರುತ್ತವೆ.

‘ರಜೋ’ ಗುಣವು ಸತ್ತ್ವ ಮತ್ತು ತಮೋ ಗುಣಗಳಿಗೆ ಕ್ರಿಯಾ ಶಕ್ತಿಯನ್ನು ಪ್ರದಾನಿಸುತ್ತದೆ. ಅಂದರೆ ಸತ್ತ್ವ ಗುಣ ಪ್ರಧಾನವಾಗಿರುವವರಲ್ಲಿ ಸಾತ್ತ್ವಿಕ ಕೃತಿಗಳನ್ನು ಮತ್ತು ತಮೋ ಗುಣ ಪ್ರಧಾನವಾಗಿರುವವರಲ್ಲಿ ತಾಮಸಿಕ ಕೃತ್ಯಗಳನ್ನು ಮಾಡುವ ಶಕ್ತಿಯು ಸೂಕ್ಷ್ಮ ‘ರಜೋ’ ಗುಣದಿಂದ ದೊರೆಯುತ್ತದೆ.

ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ, ವಿಜ್ಞಾನಿಗಳಿಗೆ ಈ ಸೂಕ್ಷ್ಮ ಕಣಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಬಾರದ ಈ ವಿಷಯಗಳು ನಮ್ಮಲ್ಲಿ ಕೆಲವರಿಗೆ ವಿಚಿತ್ರವೆನಿಸಬಹುದು. ಆದರೆ ಈ ಸೂಕ್ಷ್ಮ ಕಣಗಳು, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಸೃಷ್ಟಿಯನ್ನು ಆಧರಿಸುತ್ತಿವೆ ಎಂಬುವುದು ಸತ್ಯ. ನಮ್ಮಲ್ಲಿ ಯಾವ ಸೂಕ್ಷ್ಮ ಗುಣದ ಪ್ರಮಾಣ ಅಧಿಕವಿದೆ ಎಂಬುವುದು..

– ನಾವು ಪ್ರಸಂಗಗಳನ್ನು ಎದುರಿಸುವ ಬಗೆ
– ನಾವು ತೆಗೆದುಕೊಳ್ಳುವ ನಿರ್ಧಾರಗಳು
– ನಮ್ಮ ಆಯ್ಕೆಗಳು
– ನಮ್ಮ ಜೀವನ ಶೈಲಿ

ಮುಂತಾದವುಗಳನ್ನು ನಿರ್ಧರಿಸುತ್ತದೆ.

ಈ ಕಣಗಳು ಸ್ಥೂಲ ರೂಪದಲ್ಲಿ ಇರದಿರುವುದರಿಂದ, ಅವುಗಳಿಗೆ ಸ್ಥೂಲ ಗುಣ ಲಕ್ಷಣಗಳನ್ನು ನೀಡುವುದು ಕಷ್ಟ. ‌ ‌ ‌ *ವ್ಯಕ್ತಿಯಲ್ಲಿ ತ್ರಿಗುಣಗಳ ಅನಾವರಣ*

ತ್ರಿಗುಣಗಳಿಗೆ ಆಧಾರವಾಗಿ ಜ್ಯೋತಿಷ್ಯವನ್ನು ಅದರ ಫಲಾಫಲಗಳನ್ನು ಅರ್ಥ ಮಾಡಿಕೊಳ್ಳಬಹುದು. ಜ್ಯೋತಿಷ್ಯದ ಲೆಕ್ಕಾಚಾರಗಳಿಗೆ ಅದುವೇ ಸಾಧನವಾಗಿದೆ.

ನಮ್ಮ ಋಷಿಮುನಿಗಳು ಜ್ಯೋತಿಷ್ಯದಲ್ಲಿ ತ್ರಿಗುಣಗಳು ಹೇಗೆ ಪ್ರಮುಖಪಾತ್ರ ವಹಿಸುವುದು ಹಾಗೂ ಇದನ್ನು ಜಾತಕ ವಿಶ್ಲೇಷಣೆಯಲ್ಲಿ ಒಂದು ಸಾಧನವನ್ನಾಗಿ ಹೇಗೆ ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ. ತ್ರಿಗುಣಗಳು ನಮ್ಮ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂದು ಸಂಕ್ಷಿಪ್ತವಾಗಿ ತಿಳಿಯೋಣ.

ಆತ್ಮವು ಪ್ರಾಪಂಚಿಕವಾಗಿ ವ್ಯವಹರಿಸಲು ಮೂರು ಗುಣಗಳನ್ನು ಮನಸ್ಸಿನ ಮೂಲಕ ಪ್ರಕಟಪಡಿಸುತ್ತದೆ. ಇದನ್ನೇ ತ್ರಿಗುಣಗಳು (ಸತ್ವ, ರಜಸ್ಸು ಮತ್ತು ತಮೋಗುಣ) ಎನ್ನುತ್ತಾರೆ. ಪ್ರತಿಯೊಬ್ಬರಲ್ಲೂ ಈ ಮೂರೂ ಗುಣಗಳು ಪೂರ್ವಜನ್ಮ ಕರ್ಮಾನುಸಾರ ಇರುತ್ತವೆ. ಯಾವ ಗುಣ ಅಧಿಕವಾಗಿರುವುದೋ ಆ ಗುಣದ ಪ್ರಭಾವವನ್ನು ಅವರ ಗುಣ, ನಡತೆಯಲ್ಲಿ ಕಾಣಬಹುದು.

1. *ಸಾತ್ವಿಕಗುಣ* : ಸಾತ್ವಿಕ ಗುಣದವರು ಬುದ್ಧಿವಂತರಾಗಿ, ನಿರ್ಮಲ ಮನಸ್ಸಿನವರಾಗಿರುತ್ತಾರೆ. ದಯೆ, ಕರುಣೆ, ಇವರ ಸ್ವಭಾವವಾಗಿದ್ದು ಜೀವನದಲ್ಲಿ ತೃಪ್ತ ಭಾವವನ್ನು ಹೊಂದಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಿತಪ್ರಜ್ಞರಾಗಿರುತ್ತಾರೆ.

2. *ರಾಜಸಿಕಗುಣ* : ಕ್ರಿಯಾಶೀಲತೆಯೇ ಇದರ ಪ್ರಮುಖ ಗುಣ. ಮುಂಗೋಪ, ಅಹಂಕಾರ, ಸ್ವಾರ್ಥ ಬುದ್ಧಿ ಇವರ ಸ್ವಭಾವವಾಗಿರುತ್ತದೆ. ಜೀವನದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು ತಮ್ಮಲ್ಲಿರುವ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸುವುದಿಲ್ಲ. ಮಧ್ಯಮ ಬುದ್ಧಿವಂತರಾಗಿದ್ದು ನೆನಪಿನ ಶಕ್ತಿಯಲ್ಲಿ ಏರಿಳಿತಗಳಿರುತ್ತವೆ. ನಾಸ್ತಿಕ ಸ್ವಭಾವಇವರದಾಗಿದ್ದು ನಡತೆಯಲ್ಲಿ ಪ್ರಾಮಾಣಿಕತೆಯಿರುವುದಿಲ್ಲ.

3. *ತಾಮಸಿಕಗುಣ* : ಅಜ್ಞಾನ, ಸೋಮಾರಿತನ, ವಿತಂಡವಾದಗಳೇ ತಾಮಸಿಕ ಗುಣದ ಹೆಗ್ಗುರುತಾಗಿದೆ. ಕೆಟ್ಟ ಹವ್ಯಾಸ, ದುಷ್ಟ ಸಹವಾಸದಲ್ಲಿರುತ್ತಾರೆ. ನೆನಪಿನ ಶಕ್ತಿಯೂ ಇಲ್ಲದೆ ಮಾನಸಿಕ ದೃಢತೆಯಿರುವುದಿಲ್ಲ. ತಮ್ಮ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳಲು ಮುಂದಾಗುವುದಿಲ್ಲ.

ಈಗ ಒಬ್ಬ ವ್ಯಕ್ತಿಯ ಮನದಾಳವನ್ನು ಅವನು ಹೇಳದೆಯೇ ಜಾತಕದಲ್ಲಿ ಹೇಗೆ ತಿಳಿಯಬಹುದು ಎಂದು ನೋಡೋಣ.

*ಜಾತಕದಲ್ಲಿ ಗುಣ ಗುರುತಿಸುವಿಕೆ :*

ಗ್ರಹಗಳಿಗೆ ತ್ರಿಗುಣಗಳನ್ನು ಅಳವಡಿಸಿದಾಗ –

ಬುಧ, ಗುರು- ಗ್ರಹಗಳು ಸಾತ್ವಿಕಗುಣವನ್ನು ಪ್ರತಿನಿಧಿಸುವುದು.

ರವಿ, ಚಂದ್ರ, ಶುಕ್ರ- ಗ್ರಹಗಳು ರಾಜಸಿಕ ಗುಣವನ್ನು ಸೂಚಿಸುವುದು.

ಕುಜ, ಶನಿ, ರಾಹು, ಕೇತು- ಗ್ರಹಗಳು ತಾಮಸಿಕ ಗುಣದ ಪ್ರತೀಕಗಳಾಗಿವೆ.

ಈ ಗ್ರಹಕ್ಕೆ ಸಂಬಂಧಪಟ್ಟ ರಾಶಿಗಳು ಹಾಗೂ ನಕ್ಷತ್ರಗಳೂ ಸಹ ಇದೇ ರೀತಿ ಗುಣಗಳನ್ನು ಪ್ರತಿನಿಧಿಸುವುದು. ಜನ್ಮ ಲಗ್ನವು ಜಾತಕನ ವ್ಯಕ್ತಿತ್ವವನ್ನು ಹೇಳುವುದರಿಂದ ಲಗ್ನ ಸ್ಥಿತ ರಾಶಿ, ಲಗ್ನಕ್ಕೆ ಪ್ರಭಾವ ಬೀರುವ ಗ್ರಹಗಳು ಹಾಗೂ ಅವುಗಳು ಸ್ಥಿತವಾಗಿರುವ ನಕ್ಷತ್ರಗಳನ್ನು ಗಮನಿಸಿದಾಗ ವ್ಯಕ್ತಿಯ ಗುಣವನ್ನು ನಾವು ಸುಲಭವಾಗಿ ತಿಳಿಯಬಹುದಾಗಿದೆ.

*ಜೀವನದಲ್ಲಿ ತ್ರಿಗುಣಗಳು:*

ಪ್ರತಿಯೊಬ್ಬರಲ್ಲೂ ಮೂರೂ ಗುಣಗಳಿರುತ್ತವೆ. ಒಂದರ ಗುಣ ಅಧಿಕವಾಗಿದ್ದರೆ ಮತ್ತೊಂದು ಗುಣ ಮರೆಯಾಗಿರುವುದು. ಯಾರೂ ಸಹ ಜೀವನದಲ್ಲಿ ಸಂಪೂರ್ಣವಾಗಿ ಒಂದೇ ಗುಣದಲ್ಲಿ ಇರಲು ಸಾಧ್ಯವಿಲ್ಲ. ಸಮಯ, ಸಂದರ್ಭ ಬಂದಾಗ ಮರೆಯಾಗಿರುವ ಗುಣ ಪ್ರಕಟವಾಗುವುದು. ಈ ಸಮಯ ಸಂದರ್ಭವನ್ನೇ ನಾವು ಜ್ಯೋತಿಷ್ಯದಲ್ಲಿ ದಶಾ-ಭುಕ್ತಿ ಎಂದು ಕರೆಯುತ್ತೇವೆ. ತಾಮಸಿಕ ಗುಣದ ವ್ಯಕ್ತಿಗೆ ಸಾತ್ವಿಕ ಗ್ರಹದ ದಶೆ ಪ್ರಾರಂಭವಾದಾಗ ಆ ವ್ಯಕ್ತಿಯಲ್ಲಿ ಪರಿವರ್ತನೆ ಕಾಣಬಹುದು.

ವಿವಾಹ ಸಮಯದಲ್ಲಿ ಹೊಂದಾಣಿಕೆ ಮಾಡುವಾಗ, ಪಾಲುದಾರಿಕೆ ವ್ಯವಹಾರ ಮಾಡುವಾಗ, ಮತ್ತೊಬ್ಬರಿಗೆ ಸಾಲ ನೀಡುವಾಗ ಜಾತಕ ಪರಿಶೀಲಿಸಿ ಗುಣಗಳನ್ನು ಅಭ್ಯಾಸ ಮಾಡಿದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುವುದು. ಇದರಿಂದ ಮದುವೆಯಾದ ನಂತರ ಕಷ್ಟಪಡುವುದು, ಪಾಲುದಾರಿಕೆಯಲ್ಲಿ ನಷ್ಟ ಮಾಡಿಕೊಳ್ಳುವುದು, ಸಾಲ ನೀಡಿ ಹಣ ಕಳೆದುಕೊಳ್ಳುವುದು ತಪ್ಪುತ್ತದೆ.

*ಪ್ರತಿ ದಿನದಲ್ಲಿ ತ್ರಿಗುಣ :*

ಗುಣಗಳ ಇರುವಿಕೆಯನ್ನು ನಮ್ಮ ದೈನಂದಿನ ಚಟುವಟಿಕೆಗಳ ದೃಷ್ಟಿಯಿಂದಲೂ ವಿಶ್ಲೇಷಿಸಬಹುದು. ದಿನದ 24 ಗಂಟೆಗಳನ್ನೂ ಸಹ ಸತ್ವ-ರಜೋ-ತಮೋ ಗುಣಗಳ ಕಾಲಗಳನ್ನಾಗಿ ವಿಭಾಗಿಸಬಹುದು.

1. ಬೆಳಗಿನ ಜಾವ 4 ಗಂಟೆಯಿಂದ 8 ಗಂಟೆಯವರೆಗೆ ಮತ್ತು ಸಾಯಂಕಾಲ 4 ರಿಂದ 8 ಗಂಟೆಯವರೆಗೆ, ಅಂದರೆ ಒಟ್ಟು 8 ತಾಸುಗಳ ಕಾಲ ಸತ್ವ ಗುಣ ಪ್ರಧಾನವಾಗಿರುತ್ತದೆ.

2. ರಾತ್ರಿ 8 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ತಮೋ ಗುಣ ಪ್ರಧಾನವಾಗಿರುವುದು.

3. ಬೆಳಗಿನ 8 ರಿಂದ ಸಂಜೆ 4 ಗಂಟೆಯವರೆಗೂ ರಜೋ ಗುಣ ಪ್ರಧಾನವಾಗಿರುವುದು.

ಈ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ಆಧ್ಯಾತ್ಮಿಕ ಸಾಧನಾ ಅನುಷ್ಠಾನ, ವ್ಯಾವಹಾರಿಕ ಕೆಲಸಗಳು ಮತ್ತು ನಿದ್ರೆಯನ್ನು ರೂಢಿಸಿಕೊಂಡಿದ್ದೇವೆ. ಆಧ್ಯಾತ್ಮಿಕ ಸಾಧನೆಗೆ ತಿರುಳಾಗಿರುವ ಏಕಾಗ್ರತೆ ಸತ್ವಗುಣದಿಂದ ದೊರೆಯುತ್ತದೆ. ಎಲ್ಲ ಚಟುವಟಿಕೆಗಳಿಗೆ ಬೇಕಾಗುವ ಉತ್ಸಾಹ ರಜೋಗುಣದಿಂದ ಉಂಟಾಗುತ್ತದೆ. ಸಕಲವನ್ನೂ ಆವರಿಸಿಕೊಂಡು ಮೈಮರೆಯುವಂತೆ ಮಾಡುವ ನಿದ್ರೆಯು ತಮೋಗುಣದಿಂದ ಉಂಟಾಗುತ್ತದೆ.
(ಸಂಗ್ರಹದಿಂದ)

Leave a Reply

Your email address will not be published. Required fields are marked *